Shali Vahana Year

🌹🌹 #ಶಾಲಿವಾಹನನ #ಜನ್ಮಸ್ಥಳ #ತಂಡಗದ #ಚನ್ನಕೇಶವ #ದೇವಾಲಯ 🌹🌹

🔸ಮದುವೆ, ಮುಂಜಿ, ಗೃಹಪ್ರವೇಶದ ಸಂದರ್ಭದಲ್ಲಿ, ಇಲ್ಲವೇ ದೇವಾಲಯಗಳಲ್ಲಿ ಅರ್ಚಕರು, ಪುರೋಹಿತರು ಪೂಜೆ ಮಾಡುವಾಗ “...ಕಲಿಯುಗೇ ಪ್ರಥಮ ಪಾದೇ ಜಂಬೂ ದ್ವೀಪೇ ಭರತವರ್ಷೇ ಭರತಖಂಡೇ ಗೋದಾವರ್ಯಾಃ ದಕ್ಷಿಣೇ ತೀರೇ ಶಾಲಿವಾಹನಶಕೆ,  ಬೌದ್ಧಾವತಾರೇ ರಾಮಕ್ಷೇತ್ರೇ... ಎಂದು ಹೇಳುವುದನ್ನು ಕೇಳಿರಬಹುದು.. ಇದರಲ್ಲಿ ಬರುವ ಶಾಲಿವಾಹನ ಶಕೆ ಎಂದರೇನು ಗೊತ್ತೆ...?

🔸ಶಾಲಿವಾಹನ ಶಕ ಪುರುಷ. ನಾವು ಇಂದಿನ ವ್ಯವಹಾರದಲ್ಲಿ ಕ್ರಿಸ್ತ ಪೂರ್ವ ಮತ್ತು ಕ್ರಿಸ್ತ ಶಕ ಎಂದು ಹೇಗೆ ಬಳಸುತ್ತೇವೆಯೋ ಹಾಗೆಯೇ ಹಿಂದೆ ವಿಕ್ರಮ ಶಕೆಯನ್ನು ಅನುಸರಿಸಲಾಗುತ್ತಿತ್ತು. ಕೆಲವು ಉತ್ತರ ಭಾರತೀಯರು ಇಂದಿಗೂ ವಿಕ್ರಮಶಕೆಯನ್ನು ತಮ್ಮ ಸಾಂಪ್ರದಾಯಿಕ ಕಾಲ ಗಣನೆಗೆ ಪರಿಗಣಿಸುತ್ತಾರೆ. 

🔸ಅದೇ ರೀತಿ ದಕ್ಷಿಣ ಭಾರತದಲ್ಲಿ ಅದರಲ್ಲೂ ಕರ್ನಾಟಕ ಮತ್ತು ಆಂಧ್ರಪ್ರದೇಶದಲ್ಲಿ ಶಾಲಿವಾಹನ ಶಕೆ ಕಾಲ ಗಣನೆಯಾಗಿದೆ. ಇಂಥ ಶಕಪುರುಷ ಶಾಲಿವಾಹನ ಹುಟ್ಟಿದ್ದೇ ಕರ್ನಾಟಕದಲ್ಲಿ ಎಂಬುದು ಹಲವರಿಗೆ ತಿಳಿದಿಲ್ಲ. ಶಾಲಿವಾಹನ ಹುಟ್ಟಿದ್ದು ತುಮಕೂರು ಜಿಲ್ಲೆ, ತುರುವೇಕೆರೆ ಬಳಿಯ ತಂಡಗದಲ್ಲಂತೆ.  ಈ ಬಗ್ಗೆ ಮೈಸೂರು ವಿಶ್ವವಿದ್ಯಾಲಯದ ವಿಶ್ವಕೋಶದಲ್ಲೂ ಉಲ್ಲೇಖವಿದೆ.

🔸ಆದರೆ ಸರ್ಕಾರದಿಂದ ಮತ್ತು ಸಾರ್ವಜನಿಕರಿಂದ ಕಡೆಗಣಿಸಲ್ಪಟ್ಟಿರುವ ತಂಡಗ ಶಕಪುರುಷನ ತವರಾದರೂ ಇಂದಿಗೂ ಹೆಚ್ಚಿನ ಪ್ರಚಾರವಿಲ್ಲದ ಪುಟ್ಟ ಗ್ರಾಮವಾಗಿಯೇ ಉಳಿದಿದೆ. ರಾಜ್ಯದ ಪ್ರವಾಸೋದ್ಯಮ ಇಲಾಖೆ ಈ ಊರನ್ನು ಸಂಪೂರ್ಣ ನಿರ್ಲಕ್ಷಿಸಿದೆ.

🔸ಕಲ್ಪತರುವಿನ ನಾಡು ತುರುವೇಕೆರೆಗೆ 12 ಕಿ.ಮೀ. ದೂರದಲ್ಲಿರುವ ಶಕಪುರುಷನ ಹುಟ್ಟೂರಾದ ತಂಡಗ ಪ್ರವೇಶಿಸುತ್ತಿದ್ದಂತೆಯೇ ಗಣಪತಿಯ ದೇವಾಲಯವಿದ್ದು, ಇದರ ಬಿತ್ತಿಯ ಮೇಲಿರುವ ಶಾಲಿವಾಹನ ಮಹಾದ್ವಾರ, ಧರ್ಮೋ ರಕ್ಷತಿ ರಕ್ಷಿತಃ  ಎಂಬ ಫಲಕ ಸ್ವಾಗತಿಸುತ್ತದೆ.

🔸ಇಲ್ಲಿಗೆ ಕಾಲ್ನಡಿಗೆಯ ದೂರದಲ್ಲಿ ಹೊಯ್ಸಳರ ದೊರೆ 3ನೇ ವೀರ ಬಲ್ಲಾಳನ ಕಾಲದಲ್ಲಿ ಅಂದರೆ 1316ರಲ್ಲಿ  ನಿರ್ಮಿಸಲಾದ ಚನ್ನಕೇಶವನ ದೇವಾಲಯವಿದೆ. ದೇವಾಲಯಕ್ಕೆ ಸ್ವಲ್ಪ ದೂರದಲ್ಲಿ ಗರುಡಗಂಬವಿದ್ದು ಅಲ್ಲಿಯವರೆಗೆ ಹಿಂದೆ ದೇವಾಲಯವಿತ್ತು ಎಂಬುದನ್ನು ಸಾರುತ್ತದೆ. ಆದರೆ ಈಗ ಅಲ್ಲಿ ಮನೆಗಳ ನಿರ್ಮಾಣವಾಗಿದೆ.

🔸ಎಲ್ಲ ಹೊಯ್ಸಳ ದೇವಾಲಯಗಳಂತೆ ನಕ್ಷತ್ರಾಕಾರದ ಜಗತಿಯ ಮೇಲಿಲ್ಲ. ಬದಲಾಗಿ ಮುಖಮಂಟಪ ಮಾತ್ರ ಎತ್ತರದಲ್ಲಿದ್ದು, ಸುತ್ತಲ ಗುಡಿ ನೆಲಮಟ್ಟದಲ್ಲೇ ಇದೆ. ಇದು ಪೂರ್ವಾಭಿಮುಖವಾಗಿರುವ ಒಂದೇ ಗರ್ಭಗೃಹದ ಏಕ ಕೂಟ ದೇವಾಲಯ. 

🔸ಈ ದೇವಾಲಯದ ಭಿತ್ತಿಗಳಲ್ಲಿ ಬೇಲೂರು, ಹಳೆಬೀಡು, ನಾಗಲಾಪುರಗಳಲ್ಲಿರುವಂತೆ ಹೆಚ್ಚಿನ ಸಂಖ್ಯೆಯಲ್ಲಿ ಸೂಕ್ಷ್ಮ ಕೆತ್ತನೆಯ ಕಲಾಕೃತಿಗಳು ಇಲ್ಲದಿದ್ದರೂ, ಅರೆಕಂಬ, ಅರೆ ಗೋಪುರಗಳಿಂದ ಕೂಡಿದೆ. ಅಲ್ಲಲ್ಲಿ ಉಗ್ರನರಸಿಂಹ, ವಿಷ್ಣು ಇತ್ಯಾದಿ ಶಿಲ್ಪಗಳಿವೆ. ಮೇಲ್ಭಾಗದ ಪಟ್ಟಿಕೆಗಳಲ್ಲಿ ಶೃಂಗೇರಿ ಪೀಠದ ಲಾಂಛನದಂತೆಯೇ ಭಾಸವಾಗುವ ಹಂಸ, ಸರ್ಪ ಹಿಡಿದ ಗರುಡ, ಚನ್ನಕೇಶವನ ಸುಂದರ ಕೆತ್ತನೆ ಇದೆ.

🔸ಮುಖಮಂಟಪದ ಮೇಲೆ ಈಗ ಗಾರೆಗಚ್ಚಿನ ಗೋಪುರ ನಿರ್ಮಿಸಲಾಗುತ್ತಿದ್ದು, ಗೋಪುರ ಗೂಡಿನಲ್ಲಿ ಗೋಪಾಲಕೃಷ್ಣನ ಮೂರ್ತಿಯಿದೆ ದೇವಾಲಯದ ಭುವನೇಶ್ವರಿಗಳ ಕೆತ್ತನೆ ಅದ್ಭುತವಾಗಿದೆ. ಪ್ರಧಾನ ದ್ವಾರದ ಮುಂದೆ ದೀರ್ಘದಂಡ ನಮಸ್ಕಾರ ಮಾಡುತ್ತಿರುವ ಭಕ್ತವಿಗ್ರಹವಿದೆ. ದ್ವಾರದ ಬಾಗಿಲವಾಡದ ಎಡಬಲದಲ್ಲಿ ದ್ವಾರಪಾಲಕರ ವಿಗ್ರಹಗಳಿವೆ. ಮೇಲ್ಭಾಗದಲ್ಲಿ ಶಾಸನವೊಂದಿದೆ. 

🔸ಶಂಕರನಾರಾಯಣ ಪುರ ಎಂದು ಖ್ಯಾತವಾಗಿದ್ದ ಈ ಗ್ರಾಮವನ್ನು ಬ್ರಾಹ್ಮಣರಿಗೆ ಅಗ್ರಹಾರವಾಗಿ ನೀಡಲಾಗಿತ್ತೆಂದು ತಿಳಿದುಬರುತ್ತದೆ. ಪ್ರವೇಶದ ಬಳಿ ಅಪರೂಪದ ಆಣೆ ಕಲ್ಲೊಂದಿದೆ. ಹಿಂದೆ ನ್ಯಾಯ ಪಂಚಾಯ್ತಿ ಮಾಡುವಾಗ ಈ ಕಲ್ಲು ಮುಟ್ಟಿಸಿ ಆಣೆ ಪ್ರಮಾಣ ಮಾಡುತ್ತಿದ್ದರೆಂದೂ ಇದು ಅತ್ಯಂತ ಶಕ್ತಿಶಾಲಿ ಶಿಲೆಯೆಂದೂ ಹೇಳಲಾಗುತ್ತದೆ. ಈಗಲೂ ಜನ ಇದನ್ನು ಮುಟ್ಟಿ ಆಣೆ ಮಾಡಲು ಹೆದರುತ್ತಾರೆ.

🔸ಒಳಗಿರುವ ನವರಂಗದಲ್ಲಿನ ಕಂಬಗಳ ಕೆತ್ತನೆ ಸುಂದರವಾಗಿದೆ. ಅಂತರಾಳದ ಬಾಗಿಲವಾಡದಲ್ಲಿ ಗಜಲಕ್ಷ್ಮೀಯ ಕೆತ್ತನೆ ಇದೆ. ಪಕ್ಕದಲ್ಲಿ ಕಾಲ್ಪನಿಕ ಮಕರ ತೋರಣದ ಶಿಲ್ಪವಿದೆ. ಬಾಗಿಲವಾಡದಲ್ಲಿ ಜಾಲಂದ್ರವನ್ನೂ ನಿರ್ಮಿಸಲಾಗಿದೆ. ಅಂತರಾಳದಲ್ಲಿ ಅರೆ ಗೋಪುರಗಳಿವೆ. ಗರ್ಭಗೃಹದ ಬಾಗಿಲವಾಡದಲ್ಲಿ ಗರುಡನ ಕೆತ್ತನೆ ಇದ್ದು, ಅಲ್ಲಿಯೂ ಬಾಗಿಲವಾಡದಲ್ಲಿ ದ್ವಾರಪಾಲಕರ ಉಬ್ಬು ಶಿಲ್ಪವಿದೆ.

🔸ಪ್ರಧಾನಗರ್ಭಗೃಹದಲ್ಲಿ 3 ಅಡಿ ಗರುಡ ಪೀಠದ ಮೇಲೆ ನಿಂತಿರುವ ಶಂಖ, ಚಕ್ರ, ಗದಾ, ಪದ್ಮಧಾರಿಯಾದ ಐದೂವರೆ ಅಡಿ ಎತ್ತರದ ಸುಂದರ ಚನ್ನಕೇಶವನ ಮೂರ್ತಿಯಿದೆ. ಕೇಶವನ ಪಾದದ ಬಳಿ ಎಡ ಬಲದಲ್ಲಿ ಸ್ತ್ರೀವಿಗ್ರಹಗಳಿವೆ. ನಿತ್ಯ ಇಲ್ಲಿ ಪೂಜಾ ಕೈಂಕರ್ಯಗಳು ನಡೆಯುತ್ತವೆ. ದೇವಾಲಯದ ಹೊರಗೆ ಕಲ್ಲಿನ ಬೃಂದಾವನವಿದೆ. ಭಗ್ನಗೊಂಡಿರುವ ಚನ್ನಕೇಶವನ ಮೂರ್ತಿಯೂ ಇದೆ. ಗರ್ಭಗೃಹದ ಮೇಲಿರುವ ಗೋಪುರ ಕಲಾತ್ಮಕವಾಗಿದ್ದು, ಮೇಲ್ಭಾಗದಲ್ಲಿ ಕಲ್ಲಿನ ಕಳಶವಿದೆ.

🔸ಸರ್ಕಾರ ಇತ್ತ ಗಮನ ಹರಿಸಿ ಕದಂಬೋತ್ಸವ, ಹಂಪಿ ಉತ್ಸವ, ಲಕ್ಕುಂಡಿ ಉತ್ಸವದ ರೀತಿಯಲ್ಲಿ ಶಾಲಿವಾಹನೋತ್ಸವ ಮಾಡಿದರೆ ಈ ಪ್ರಾಚೀನ ನಗರಿ ಜನಪ್ರಿಯವಾಗುವುದರಲ್ಲಿ ಸಂದೇಹವಿಲ್ಲ. ಇದಕ್ಕೆ ಕ್ಷೇತ್ರದ ಜನಪ್ರತಿನಿಧಿಗಳು, ಸ್ಥಳೀಯ ಜನತೆ ಮನಸ್ಸು ಮಾಡಬೇಕಷ್ಟೇ.

(ಮಾಹಿತಿ ಕೃಪೆ: ಟಿ. ಎಮ್. ಸತೀಶ್, ತುರುವೇಕೆರೆ)

👉ಶಾಲಿವಾಹನನ ಬಗ್ಗೆ ಮತ್ತಷ್ಟು ಮಾಹಿತಿ ಮುಂದಿನ ಪೊಸ್ಟ್ನಲ್ಲಿ ನೀರೀಕ್ಷಿಸಿ. ಧನ್ಯವಾದಗಳು🙏🙏

🙏ಎಲ್ಲರಿಗೂ ನಮಸ್ಕಾರ, ಶುಭನಮನಗಳು🙏

🥀🌿ವಂದನೆಗಳೊಂದಿಗೆ ಕೆ ಆರ್ ರಮೇಶ್🌿🥀

Comments

Popular Posts