Basavanagudi..
ಬಸವನಗುಡಿಯ ಗತಕಾಲದ ಆ ಮೂರು ಹೋಟೆಲ್ ಗಳು; ಅವುಗಳ ವರ್ಲ್ಡ್ ಫೇಮಸ್ ಅಡುಗೆಗಳು!
ಜೊತೆಗೆ ಬೆಳಗ್ಗೆ ನಾಲ್ಕು ಗಂಟೆಗೆ ಆರಂಭವಾಗುತ್ತಿದ್ದ ಮಂಗಳೂರು ಕಾಫಿಬಾರ್
ನಮ್ಮ ಕೋಲಾರ್ ಕಡೆ ಒಂದು ಮಾತಿದೆ ಒಂದು ಕಲ್ಲು ತಗೊಂಡು 'ನಾರಾಯಣಪ್ಪ-ನಾರಾಯಣಸ್ವಾಮಿ- ಮುನಿಯಪ್ಪ-ಮುನಿಶಾಮಪ್ಪ...ನಾಲ್ಕು ಹೆಸರು ಹೇಳಿ ಹೊಡೆದರೆ ನಿಂತಿರೋ ಎಲ್ರೂ ತಿರುಗಿ ನೋಡ್ತಾರೆ' ಏಕೆಂದರೆ ಬಹುತೇಕರ ಹೆಸರು ಈ ನಾಲ್ಕರಲ್ಲಿ ಒಂದು ಖಂಡಿತ ಆಗಿರುತ್ತಿತ್ತು ಅಂತ ಹಿಂದಿನ ತಲೆಮಾರಿನವರು ಹೇಳುತ್ತಿರುತ್ತಾರೆ.
ಅದೇ ರೀತಿ ನೀವು ಬಸವನಗುಡಿಯಲ್ಲಿ ಒಂದು ಕಲ್ಲು ಬೀಸಿದರೆ ಅದು ಹೋಗಿ ಸೀದಾ ಒಂದು ಹೋಟೆಲ್ ಮೇಲೆ ಬೀಳುತ್ತೆ...ಅಂದರೆ ಅಷ್ಟೊಂದು ಹೋಟೆಲ್- ರೆಸ್ಟೋರೆಂಟ್, ಉಪಹಾರಗೃಹಗಳು ಬಸವನಗುಡಿಯ ಸುತ್ತಮುತ್ತ!
ಇವತ್ತು ಅಷ್ಟೇ ನೀವು ಎನ್.ಆರ್. ಕಾಲೋನಿ ಇಂದ ಮೊದಲು ಗಳಿಸಿದರೆ ಮೊದಲು 'ಹೋಟೆಲ್ ದ್ವಾರಕ' ಆನಂತರ 'ಸೌತ್ ಕಿಚನ್' ನಾಲ್ಕು ಹೆಜ್ಜೆ ಅಲ್ಲಿಂದ ಮುಂದೆ ಇಟ್ಟರೆ 'ಉತ್ತರ ಕರ್ನಾಟಕದ ಗಮಗಮ' ಬ್ಯೂಗಲ್ ರಾಕ್ ಕಡೆಗೆ ಹೊರಟರೆ 'ಬೈಟು ಕಾಫಿ'.
ನೆಟ್ ಕಲ್ಲಪ್ಪ ಕಡೆಗೆ ಹೊರಟರೆ ವೆಂಕಟೇಶ್ವರ chats ಸ್ವಾಗತಿಸುತ್ತದೆ. ನಾಲ್ಕು ಹೆಜ್ಜೆ ಮುಂದೆ ಹೋದರೆ 'ದಾವಣಗೆರೆ ಬೆಣ್ಣೆ ದೋಸೆ' ನಂತರ ನೆಟ್ ಕಲ್ಲಪ್ಪ ಸರ್ಕಲ್ ನಲ್ಲಿ ನಿಂತರೆ 'ಉಪಹಾರ ದರ್ಶಿನಿ'. ಇನ್ನೂ
ನೆಟ್ ಕಲ್ಲಪ್ಪ bus stop ಹಿಂದೆ ಸಣ್ಣದೊಂದು SLV ಹೋಟೆಲ್ ಇದೆ. ಅದೊಂದು ಕಾಲದಲ್ಲಿ ಕೇಸರಿಬಾತ್ ಗೆ ಸಿಕ್ಕಾಪಟ್ಟೆ ಫೇಮಸ್... ಖಾರಾಬಾತ್ ಬಗ್ಗೆ ಹೇಳುವುದೇ ಬೇಡ ಬಾಯಲ್ಲಿ ನೀರೂರುತ್ತೆ (ಅದನ್ನ ನಮ್ಮ ಸಮಾಜ ಸೇವಕರ ಸಮಿತಿಯ ಹುಡುಗರು ತಮಾಷೆಗೆ ನೊಣದ ಹೋಟೆಲ್ ಅಂತ ಕರೀತಿದ್ವಿ. ಹೋಟೆಲ್ ಎದುರಿಗೆ ನಾಲ್ಕಾರು ಹಸುಗಳನ್ನು ಕಟ್ಟಿ ಹಾಕಲಾಗುತ್ತಿತ್ತು...ಅಲ್ಲಿ ಬೀಳುತ್ತಿದ್ದ ಸಗಣಿಗೆ ನೊಣಗಳು ಬಂದು ಮುತ್ತಿಕೊಳ್ಳುತ್ತಿದ್ದವು. ಈಗಲೂ ಹೋಟೆಲ್ ಚೆನ್ನಾಗಿ ನಡೆಯುತ್ತಿದೆ. ಆದರೆ ನೊಣಗಳ ಸಮಸ್ಯೆ ಇಲ್ಲ)
ನೆಟ್ ಕಲ್ಲಪ್ಪ ಇಂದ ಎಡ ತಿರುವಿಗೆ ತೆಗೆದುಕೊಂಡು ಡಿವಿಜಿ ರಸ್ತೆಯಲ್ಲಿ ಹೊರಟರೆ ಮೊದಲು 'ನಿಸರ್ಗ ಗಾರ್ಡನ್' ಎದುರಾಗುತ್ತದೆ ಆನಂತರ'ಗೋಕುಲ್ ರೆಸ್ಟೋರೆಂಟ್ ಅಂಡ್ ಪಾರ್ಟಿ ಹಾಲ್' ಎದುರುಗೊಳ್ಳುತ್ತದೆ. ಬ್ಯಾಂಕ್ ಆಫ್ ಬರೋಡ ಕಡೆಗೆ ತಿರುಗಿಕೊಂಡರೆ ಉತ್ತರ ಕರ್ನಾಟಕ ಶೈಲಿಯ 'ವೆಂಕಟೇಶ್ವರ ಹೋಟೆಲ್' ಸ್ವಾಗತಿಸುತ್ತದೆ.
ಮಧ್ಯೆ 'ಶ್ರೀನಿವಾಸ ಬ್ರಾಹ್ಮಣರ ಬೇಕರಿ'ಯ ಸೊಗಸಾದ
ಸ್ವೀಟ್ ಬ್ರೆಡ್ ಸಿಗುತ್ತೆ.
ಡಿವಿಜಿ ರೋಡ್ ಇಂದ ಗಾಂಧಿಬಜಾರ್ ಸರ್ಕಲ್ ಒಳಗೆ ಬಂದು ಗಣೇಶ್ ಜ್ಯೂಸ್ ಸೆಂಟರ್ ನಲ್ಲಿ ಮ್ಯಾಂಗೋ ಜ್ಯೂಸ್ ಕುಡಿದು, ಎದುರಿಗೆ ರಾಜಸ್ಥಾನಿ ಸಮೋಸ ಸವಿದು
ಮತ್ತೆ ಗಾಂಧಿಬಜಾರ್ ಸರ್ಕಲ್ ನ ಎಡ ತಿರುವಿಗೆ ತೆಗೆದುಕೊಂಡರೆ 'ಬಸವನಗುಡಿ ಹೋಟೆಲ್' ಅದರಿಂದ ನಾಲ್ಕು ಹೆಜ್ಜೆ ಯಲ್ಲಿ 'ಉಡುಪಿ ಕೃಷ್ಣ ಭವನ್' ಊಟ ದೊರೆಯುತ್ತದೆ. ಸರ್ಕಲ್ ಬಲ ತಿರುವಿಗೆ ತೆಗೆದುಕೊಂಡರೆ
ಘಮಘಮಿಸುವ ಮಲ್ಲಿಗೆಗಳ ಮಧ್ಯೆ 'ವಿದ್ಯಾರ್ಥಿ ಭವನ್' ಕೈಬೀಸಿ ಕರೆಯುತ್ತದೆ. ಸಿಕ್ಕಾಪಟ್ಟೆ ಜನ ಇದ್ದಾರೆ ಇನ್ನೊಂದು ಸಲ ಬರುತ್ತೇನೆ ಅಂತ ಮುಂದೆ ಹೋದರೆ 3 ಘರ್ ಗಳು
'ರೋಟಿ ಘರ್' (ಭರ್ಜರಿ ಊಟ), ಕೇಕ್ ಘರ್ (ಆಲೂಗಡ್ಡೆ ಪಲ್ಯ ಬನ್ ಸೂಪರ್), ಮಿಠಾಯಿ ಘರ್ ಗಳ(ಇಲ್ಲಿನ ಬಿಸಿ-ಬಿಸಿ ಮಿರ್ಚಿ, ಈರುಳ್ಳಿ ಬಜ್ಜಿ ನಾಲಿಗೆ ನೀರೂರಿಸುತ್ತೆ) ಸ್ವಾದಿಷ್ಟವಾದ ತಿಂಡಿ-ತಿನಿಸು- ಊಟಗಳು ನಿಮ್ಮನ್ನು ಸಂತೃಪ್ತಿ ಪಡಿಸುತ್ತವೆ
ಇದರ ಪಕ್ಕದಲ್ಲೇ ಮುದ್ದೆ ಪ್ರಿಯರಿಗೆ 'ಹೋಟೆಲ್ ಮಾದಪ್ಪ'
ಬಾರಪ್ಪ ಅಂತ ಕರೆಯುತ್ತಾನೆ.ಆರಾಮಾಗಿ ಕೂತು ಊಟ ಮಾಡಲು 'ಶಿವಸಾಗರ್' ನಾನ್ ವೆಜ್ ಪ್ರಿಯರಿಗೆ 'ನ್ಯೂ ಪ್ರಶಾಂತ್' 'ಕೊಲ್ಹಾಪುರಿ's' ಹೋಟೆಲ್ ಗಳು ಅತಿಥಿಗಳಿಗೆ ಎದುರಾಗುತ್ತವೆ. ಗಾಂಧಿಬಜಾರ್ ಸರ್ಕಲ್ ಗೆ ಬಂದು ಬಲಕ್ಕೆ ತೆಗೆದುಕೊಂಡರೆ (ಸಿದ್ದೋಜಿ ಕಡೆಯಿಂದ) ಮುಂದಕ್ಕೆ ಹೋದರೆ 'ಮಹಾಲಕ್ಷ್ಮಿ ಟಿಫನ್ ರೂಮ್' ಪೂರಿ ಸಾಗು- ಸೆಟ್ ದೋಸೆ- ಕ್ಯಾರೆಟ್ ಹಲ್ವ ರೆಡಿಯಾಗಿರುತ್ತೆ. ಅಲ್ಲಿಂದ ನಾಲ್ಕು ಹೆಜ್ಜೆ ಮುಂದೆ ಹೋಗಿ ನ್ಯಾಷನಲ್ ಕಾಲೇಜ್ ರಸ್ತೆ ಕಡೆಗೆ ಬಂದರೆ SLVಹೋಟೆಲ್ ಉಪ್ಪಿಟ್ಟು ಕೈಬೀಸಿ ಕರೆಯುತ್ತದೆ. ಇದರ ಜೊತೆಗೆ ಸೇರಿಸಬಹುದು ಎನ್ನುವುದಾದರೆ 'ಬ್ರಾಹ್ಮಣರ ಕಾಫಿ ಬಾರ್...' ನಾನು ಕೂಡ ಬಸವನಗುಡಿಗೆ ಸೇರಿದವನು ಅಂತ ಹೇಳುತ್ತೆ...
ಹೀಗಂತ ಬಸವನಗುಡಿ ಹೋಟೆಲ್ಗಳ ಪರಿಚಯ ಇಲ್ಲಿಗೆ ಮುಗಿಯುವುದಿಲ್ಲ...ಸಣ್ಣ ದೊಡ್ಡ ಹೋಟೆಲ್ ಮತ್ತು ರಸ್ತೆಬದಿಯ chats ಲೆಕ್ಕ ಹಾಕಿ ನೋಡಿದರೆ ಬಸವನಗುಡಿಯಲ್ಲಿ ಬರೋಬ್ಬರಿ 200 ಕ್ಕೂ ಹೆಚ್ಚಿನ ಎಲ್ಲಾ ತರದ food pointಗಳು ಸಿಗುತ್ತದೆ...ಇಂದಿಗೂ ಕೂಡ ಯಾವುದೇ ಹೋಟೆಲ್ ಗೆ ಹೋದರೂ ಕೂಡ ಭರ್ಜರಿ ವ್ಯಾಪಾರ ನೀವು ಕಾಣುತ್ತೀರಿ...ಬಸವನಗುಡಿಯ ಜನ ಭೋಜನ ಪ್ರಿಯರು...
ಇಷ್ಟಾಗಿಯೂ ನನ್ನನ್ನು ಕಾಡುವುದು ಇವುಗಳ ಮಧ್ಯೆ
ಕಳೆದುಹೋಗಿರುವ ಆ ಮೂರು ಹೋಟೆಲ್ ಗಳು...ಅದರ ರುಚಿ ರುಚಿಯಾದ ತಿಂಡಿ ಮತ್ತು ಊಟ...
*ಮಾಡ್ರನ್ ಹೋಟೆಲ್: ಪಕೋಡ ಮತ್ತು ಸ್ಟ್ರಾಂಗ್ ಕಾಫಿ!
ಸುಬ್ಬಮ್ಮನ ಅಂಗಡಿಯ ಹತ್ತಿರ ನಮಗೆ ಎದುರಾಗುವ ಕಾಶಿ ವಿಶ್ವನಾಥ ದೇವಸ್ಥಾನದ ಎದುರಿಗೆ ಒಂದು ಸಣ್ಣ ಹೋಟೆಲ್ ಇತ್ತು. ಅದರ ಹೆಸರು 'ಮಾಡ್ರನ್'. ಅದು ಪಕೋಡ ಮತ್ತು ಸ್ಟ್ರಾಂಗ್ ಕಾಫಿಗೆ ಸಿಕ್ಕಾಪಟ್ಟೆ ಫೇಮಸ್ ಆಗಿತ್ತು...ಬಿಸಿಬಿಸಿ 100 ಗ್ರಾಂ ಪಕೋಡ ಅದರ ಜೊತೆಗೆ ಸ್ಟ್ರಾಂಗ್ ಕಾಫಿ...ಕಾಲ್ ಕೆಜಿ ಪಕೋಡ ತಿಂದು 2 ಸ್ಟ್ರಾಂಗ್ ಕಾಫಿ ಕುಡಿದು ಹೋಗೋರು ಇದ್ದರು...ಪುಟ್ಟದಾಗಿದ್ದರೂ ಸಕ್ಕತ್ ಆಗಿದ್ದ ಹೋಟೆಲ್ ಅದು...ಪಕೋಡ ಬಾಂಡಲಿ ಇಂದ
ಹೊರಗೆ ಬೀಳುವುದೇ ತಡ ಬಾಯಿತೆರೆದು ಜನ ನಿಂತಿರುವರು ಬಾಯಿಗೆ ಹಾಕಿಕೊಳ್ಳಲು. ಅಂತಹ ರುಚಿ ಹೊಂದಿತ್ತು ಕಿರಿದಾದ ಮಾಡ್ರನ್ ಹೋಟೆಲ್ ಪಕೋಡ!
ಆ ಸ್ಥಳದ ಓನರ್ ಜಾಗ ಮಾರಿದ ಕಾರಣಕ್ಕೆ ಅಂಗಡಿ ಮುಚ್ಚಿಬಿಟ್ಟರು!
SLV ಶ್ರೀ ಲಕ್ಷ್ಮಿ ವೆಂಕಟೇಶ್ವರ ಹೋಟೆಲ್: ಪಲಾವ್
ಬುಲ್ ಟೆಂಪಲ್ ರೋಡ್ ಲ್ಲಿ SLV (ಶ್ರೀ ಲಕ್ಷ್ಮಿ ವೆಂಕಟೇಶ್ವರ ಹೋಟೆಲ್) ಅಂತ ಹೋಟೆಲ್ ಒಂದಿತ್ತಾ ಅಂತ ಅನೇಕರು ಈಗಲೂ ನನ್ನನ್ನು ಕೇಳುತ್ತಾರೆ! ದೊಡ್ಡ ಗಣಪತಿ ದೇವಸ್ಥಾನ ದಿಂದ ಎನ್.ಆರ್. ಕಾಲೋನಿ ಕಡೆಗೆ ಹೋಗುವಾಗ ಬಿ.ಎಂ.ಎಸ್ ಇಂಜಿನಿಯರಿಂಗ್ ಕಾಲೇಜು ಹತ್ತಿರ ಸೋನಾಟಾ ಸಾಫ್ಟ್ವೇರ್ ಕಂಪನಿ ಕಟ್ಟಡ ಎದುರಾಗುತ್ತದೆ. ಇದೇ ಬಿಲ್ಡಿಂಗ್ನಲ್ಲಿ ಹಳೆ ಕೆಇಬಿ ಆಫೀಸ್ ಇತ್ತು. ಅದರ ಪಕ್ಕದಲ್ಲೇ ಲಕ್ಷ್ಮಿವೆಂಕಟೇಶ್ವರ ಹೋಟೆಲ್ ಕೂಡ ಇತ್ತು. (ಅದೇ ಜಾಗದಲ್ಲಿ ಬಸವನಗುಡಿ ರೆಸ್ಟೋರೆಂಟ್ ಮುಂದೆ ತಲೆಯೆತ್ತಿತ್ತು. ಆದರೆ ಅದು ಕೂಡ ಈಗ ಕಾರಣಾಂತರದಿಂದ ಮುಚ್ಚಿಬಿಟ್ಟರು). ಶ್ರೀಲಕ್ಷ್ಮಿ ವೆಂಕಟೇಶ್ವರ ಹೋಟೆಲ್ನಲ್ಲಿ ಪಲಾವ್ ಸವಿದವರಿಗೆ ಗೊತ್ತು ಅದರ ರುಚಿ...ಅದು ಕೂಡ ಬ್ರೆಡ್ ಪಲಾವ್...ನೆನಸಿಕೊಂಡರೆ ಈಗಲೂ ಬಾಯಲ್ಲಿ ನೀರೂರುತ್ತದೆ...ಕಟ್ಟಡದ ರೀನಿಮೇಶನ್ ಸಮಯದಲ್ಲಿ ಹೋಟೆಲ್ ಮುಚ್ಚಿಬಿಟ್ಟರು...
ಎನ್ ಆರ್ ಕಾಲೋನಿ ಭವ್ಯ ದರ್ಶಿನಿ: ಕೈಗೆಟಕುವ ಬೆಲೆಯಲ್ಲಿ ತಿಂಡಿ-ಊಟ!
ಎನ್ ಆರ್ ಕಾಲೋನಿಯ ಬಸ್ ಸ್ಟ್ಯಾಂಡ್ ನಲ್ಲಿದ್ದ
'ಭವ್ಯ ದರ್ಶಿನಿ' ಎಂದರೆ ಬಡವರ ಪಾಲಿಗೆ ಫೈವ್ ಸ್ಟಾರ್ ಹೋಟಲ್ ಇದ್ದಂತೆ. ಎರಡು ರೂಪಾಯಿಗೆ ಕಾಫಿ, ಯಾವುದೇ ತಿಂಡಿ ತೆಗೆದುಕೊಂಡರು ಐದು ರೂಪಾಯಿ, ಹತ್ತು ರೂಪಾಯಿಗೆ ಊಟ...ಬಡ ಕೂಲಿಕಾರ್ಮಿಕರು, ಆಟೋ ಡ್ರೈವರ್ ಗಳು, ತರಕಾರಿ ಅಂಗಡಿಯವರು, ಮಧ್ಯಮವರ್ಗದವರು ಸದಾ ಜನಜಂಗುಳಿಯಿಂದ ತುಂಬಿರುತ್ತಿದ್ದ ಹೋಟೆಲ್. ಬೆಳಗ್ಗೆ 7:00 ಗಂಟೆಗೆ ಶುರುವಾದರೆ ರಾತ್ರಿ10:00 ವರೆಗೂ non-stop ನಡೆಯುತ್ತಿತ್ತು. ಹೋಟೆಲ್ ಮುಚ್ಚುವ ಕಾಲಕ್ಕೆ ಕಾಫಿ 5 ರೂಪಾಯಿ, ತಿಂಡಿಗಳು 10 ರೂಪಾಯಿ, ಊಟ ಇಪ್ಪತ್ತು ರೂಪಾಯಿಗೆ ದೊರೆಯುತ್ತಿತ್ತು...ಬಹಳಷ್ಟು ಕಾಲ ಚೆನ್ನಾಗಿ ನಡೆದ ಹೋಟೆಲ್ ಇದು, ಆದರೆ ಅನಿವಾರ್ಯವಾಗಿ ಕಟ್ಟಡದ ಮಾಲೀಕರು ಜಾಗದಲ್ಲಿ ಹೊಸ ಕಟ್ಟಡ ಕಟ್ಟಲು ನಿರ್ಧರಿಸಿದ ಮೇಲೆ ಹೋಟೆಲ್ ಮುಚ್ಚಲಾಯಿತು...
*ಬೆಳಗ್ಗೆ ನಾಲ್ಕು ಗಂಟೆಗೆ ಆರಂಭವಾಗುತ್ತಿದ್ದ ಮಂಗಳೂರು ಕಾಫಿ ಬಾರ್
ಬಹುತೇಕ ಇಂದಿನ ಬಸವನಗುಡಿ ನಾಗರಿಕರಿಗೂ ಗೊತ್ತಿಲ್ಲದ ಮತ್ತೊಂದು ಹೋಟೆಲ್ ,ಡಿವಿಜಿ ರಸ್ತೆಯಲ್ಲಿ 1967 ರಲ್ಲಿ ಆರಂಭವಾದ ಕೃಷ್ಣ ಉರಾಳ್ ಅವರು ಆರಂಭಿಸಿದ 'ಮಂಗಳೂರು ಕಾಫಿ ಬಾರ್'. ಪಾಮಿಡಿ ಬಿಲ್ಡಿಂಗ್ನಲ್ಲಿ
ನಡೆಯುತ್ತಿದ್ದ 'ಮಂಗಳೂರು ಕಾಫಿಬಾರ್' ಬೆಳಗ್ಗೆ 4- 4:30 ವರೆಗೆ ಆರಂಭವಾಗುತ್ತಿತ್ತು. ಈ ಸಮಯದಲ್ಲಿ ಸಾಧಾರಣವಾಗಿ ಕೆ ಆರ್ ಮಾರುಕಟ್ಟೆಗೆ ತರಕಾರಿ ತರಲು ಹೊರಡುತ್ತಿದ್ದ ತರಕಾರಿ ಅಂಗಡಿಯವರು ಕೂಲಿಕಾರ್ಮಿಕರು ಅಷ್ಟೊತ್ತಿಗೆ ಬಂದು ಇಲ್ಲಿ ತಿಂಡಿ ತಿನ್ನುತ್ತಿದ್ದರು. ಸೇವಾ ಮನೋಭಾವ ಈ ಹೋಟೆಲಿನ ಹೆಗ್ಗಳಿಕೆ. ಅನ್ನ -ಸಾಂಬಾರ್, ಮಂಗಳೂರು ಗೊಳಿ ಬಜ್ಜಿ
ಜೊತೆಗೆ ವಿಶೇಷವಾದ ಸಿಹಿ ಪದಾರ್ಥ 'ಮಕ್ಮಲ್ ಪೂರಿ'
ವಿವಿಧ ತರದ ತಿಂಡಿ-ತಿನಿಸುಗಳು ಇಲ್ಲಿ ದೊರೆಯುತ್ತಿತ್ತು ವಿಶೇಷವಾಗಿ ಇಲ್ಲಿಗೆ N.R. ಕಾಲೋನಿ- ಗಾಂಧಿಬಜಾರ್ ಸುತ್ತಲಿನ ಕೂಲಿಕಾರ್ಮಿಕರು ತರಕಾರಿ ಅಂಗಡಿಯವರು ದೊಡ್ಡ ಮಟ್ಟದಲ್ಲಿ ಇಲ್ಲಿಗೆ ಬಂದು ಕಡಿಮೆ ಬೆಲೆಯಲ್ಲಿ ರುಚಿಕರವಾದ ಊಟ ತಿಂಡಿಯನ್ನು ಸವಿಯುತ್ತಿದ್ದರು.
ಪ್ರಸ್ತುತ ಕೃಷ್ಣ ಉರಾಳ್ ಅವರು ನಿವೃತ್ತಿ ಜೀವನವನ್ನು ನಡೆಸುತ್ತಿದ್ದಾರೆ. ಅವರ ಮಗ ಸತೀಶ್ ಉರಾಳ್ ಅವರು ಬಸವನಗುಡಿಯ ಪ್ರಸಿದ್ಧ ಹೋಟೆಲ್ ಗಳಲ್ಲಿ ಒಂದಾದ 'ಬೈಟುಕಾಫಿ'ಯ ಪಾರ್ಟ್ನರ್ ಗಳಲ್ಲಿ ಒಬ್ಬರಾಗಿದ್ದಾರೆ.
ಇದರ ಜೊತೆಗೆ ನಟ ರಮೇಶ್ ಭಟ್ ಕುಟುಂಬ ನಡೆಸುತ್ತಿದ್ದ 'ಬಟರ್ ಸ್ಪಾಂಜ್' ಬೇಕರಿ ಜೊತೆಗೆ ಮತ್ತೊಂದು 'V.B ಬೇಕರಿ' ತಿನಿಸುಗಳು ಮರೆಯೋದಕ್ಕೆ ಸಾಧ್ಯವಿಲ್ಲ!ಬಸವನಗುಡಿ ಹೋಟೆಲ್ ಗಳ ಹಳೆಯ ನೆನಪುಗಳ ಒಂದು ರೌಂಡ್ ಇಲ್ಲಿಗೆ ಮುಗಿದಿದೆ😌 ತಾಳ್ಮೆಯಿಂದ ಇಷ್ಟನ್ನು ಓದಿದ ನಿಮಗೆ ಧನ್ಯವಾದಗಳು🙏🙏🙏
Comments
Post a Comment