Brahmins at Cross Roads

ಬ್ರಾಹ್ಮಣರೆಂದರೆ ಹೋಮ, ಹವನ ಮಾಡಿಕೊಂಡಿರುವುದಕ್ಕಷ್ಟೇ ಸೀಮಿತ ಎಂದು ಜನ ತಿಳಿದಿದ್ದಾರೆ. ಇಂದು ಬ್ರಾಹ್ಮಣರ ತ್ರಿಶಂಕು ಸ್ಥಿತಿಗೆ ಸ್ವತಃ ಬ್ರಾಹ್ಮಣರೇ ಕಾರಣರಾಗಿದ್ದಾರೆ. ಹೀಗಿರುವಾಗ ನಾವು ರಾಜಕಾರಣಿಗಳೋ ಮತ್ತೊಬ್ಬರನ್ನೋ ದೂರಿ ಪ್ರಯೋಜನವಿಲ್ಲ. ಇನ್ನಾದರೂ ಎಚ್ಚೆತ್ತುಕೊಳ್ಳುವರೇ ಬ್ರಾಹ್ಮಣರು?

ಏಪ್ರಿಲ್ 19 ರ ವಿಶ್ವವಾಣಿಯಲ್ಲಿ ಪ್ರಕಟವಾದ ರೋಹಿತ್ ಚಕ್ರತೀರ್ಥರ ‘ನೀನಾರಿಗಾದೆಯೋ ಎಲೆ ಬ್ರಾಹ್ಮಣ’ ಲೇಖನ ಓದಿದೆ. ಸುಮಾರು ದಶಕಗಳಿಂದ ನನ್ನ ಮನಸ್ಸಿನ ಆಳದಲ್ಲಿ ಹೂತು ಹೋಗಿದ್ದ ಈ ವಿಷಯ ತಕ್ಷಣ ಪುಟಿದೆದ್ದು ಮೇಲೆ ಬಂತು. ನನ್ನ ದೈಹಿಕ ಇತಿಮಿತಿಗಳನ್ನು ಮೀರಿ ಈ ಲೇಖನಕ್ಕೆ ಪ್ರತಿಕ್ರಿಯಿಸತೊಡಗಿದ್ದೇನೆ.

ಬ್ರಾಹ್ಮಣರನ್ನು ಟೀಕಿಸುವುದು ಇಂದಿನ ಪ್ರವೃತ್ತಿಯಲ್ಲ. ಅದು ಯಾವಾಗಿನಿಂದಲೂ ನಡೆದುಕೊಂಡು ಬಂದಿದೆ. ಇಲ್ಲಿ ಕೆಲವು ಸ್ವಾರಸ್ಯಕರ ಉದಾಹರಣೆಗಳನ್ನು ಕೊಡಬಯಸುತ್ತೇನೆ.

ಸುಮಾರು ಏಳು ದಶಕಗಳ ಹಿಂದಿನ ಮಾತು. ಆಗ ನಾನು ಹೈಸ್ಕೂಲ್ ವಿದ್ಯಾರ್ಥಿ. ಒಂದು ಪ್ರಬಲ ಕೋಮಿನ ನಿಯಂತ್ರಣದಲ್ಲಿದ್ದ ಒಂದು ಕಾಲೇಜಿನಲ್ಲಿ ಪ್ರಾಧ್ಯಾಪಕರೊಬ್ಬರು ಕ್ಲಾಸ್ ತೆಗೆದುಕೊಳ್ಳುತ್ತಿದ್ದಾಗ ರಾಮಾಯಣದ ಬಗ್ಗೆ ಹೇಳುತ್ತಿದ್ದರು. ಸೀತೆ ರಾವಣನ ಲಂಕೆಯಲ್ಲಿದ್ದರೂ ತನ್ನ ಪಾವಿತ್ರ್ಯವನ್ನು ಕಳೆದುಕೊಂಡಿದ್ದರೂ ರಾಮ ಅವಳನ್ನು ಮನೆಗೆ ಸೇರಿಸಿಕೊಂಡ. ನಾವ್ಯಾರಾದರೂ ಆಗಿದ್ದರೆ ಅವಳ ಕೊಲೆ ಮಾಡುತ್ತಿದ್ದೆವು. ಬ್ರಾಹ್ಮಣರಿಗೆ ಮಾನ ಮರ್ಯಾದೆಯೇ ಇಲ್ಲವೆಂದು ಹೇಳಿದರು. ಆಗ ಒಬ್ಬ ಬ್ರಾಹ್ಮಣ ವಿದ್ಯಾರ್ಥಿ ಎದ್ದು ನಿಂತು ‘ಸರ್, ರಾಮ ಮತ್ತು ಸೀತೆ ಬ್ರಾಹ್ಮಣರೆಂದು ನಿಮಗೆ ಯಾರು ಹೇಳಿದರು? ಅವರು ಕ್ಷತ್ರಿಯರು’ ಎಂದು ಹೇಳಿದಾಗ ಪ್ರಾಧ್ಯಾಪಕರ ಮುಖ ಇನ್ನಷ್ಟು ಕಪ್ಪಿಟ್ಟಿತು. ಆ ವಿದ್ಯಾರ್ಥಿ ಮುಂದೆ ಬೆಂಗಳೂರಲ್ಲಿಯ ಒಂದು ಪ್ರತಿಷ್ಠಿತ ಕಾಲೇಜಿನ ಪ್ರಿನ್ಸಿಪಾಲರಾಗಿ ನಿವೃತ್ತರಾದರು. ಅವರು ಈಗ ಇಲ್ಲ. ಆ ಪ್ರಾಧ್ಯಾಪಕರೂ ಇಲ್ಲ.
   1982 ರಲ್ಲಿರಬಹುದು ಆಗ ಹುಬ್ಬಳ್ಳಿಯಲ್ಲಿ ಅಖಿಲ ಕರ್ನಾಟಕ ಬ್ರಾಹ್ಮಣ ಸಮ್ಮೇಳನ ನಡೆಯಿತು. ಆಗಿನ ಮುಖ್ಯಮಂತ್ರಿ ಆರ್. ಗುಂಡೂರಾವ್ ದಿವಂಗತ ಎಸ್.ಆರ್.ಬೊಮ್ಮಾಯಿ ಹಾಗೂ ಮೂರು ಸಾವಿರ ಮಠದ ಆಗಿನ ಜಗದ್ಗುರುಗಳಲ್ಲದೆ ಅನೇಕ ಗಣ್ಯರು ಆಗಮಿಸಿದ್ದರು. ಒಬ್ಬ ಪತ್ರಕರ್ತನಾಗಿ ಹಾಗೂ ಆಸಕ್ತ ನಾಗರಿಕನಾಗಿ ನಾನು ಸಮ್ಮೇಳನಕ್ಕೆ ಹೋಗಿದ್ದೆ. ಎಸ್.ಆರ್.ಬೊಮ್ಮಾಯಿ ಅವರು ಮಾತನಾಡುವಾಗ ‘ಬ್ರಾಹ್ಮಣರು ಜಾಣರು. ಸಮುದ್ರದಲ್ಲಿ ಒಗೆದರೂ ಪಾರಾಗಿ ಬರುತ್ತಾರೆ’. ಎಂದು ಹೇಳಿದ್ದನ್ನು ಗುಂಡುರಾವ್ ತಮ್ಮ ಭಾಷಣದಲ್ಲಿ ಪ್ರಸ್ತಾಪಿಸಿ ‘ಬ್ರಾಹ್ಮಣರೇನೋ ಪಾರಾಗಿ ಬರಬಹುದು. ಆದರೆ ನೀವು ಅವರನ್ನು ಸಮುದ್ರದಲ್ಲೇಕೆ ಒಗೆಯುತ್ತೀರಿ?, ಎಂದು ಕೇಳಿದಾಗ ಸಭಿಕರಿಂದ ಕರತಾಡನದ ಸುರಿಮಳೆ. ತಮ್ಮ ಭಾಷಣ ಮುಂದುವರಿಸಿದ ಗುಂಡುರಾವ್ ವೇದಿಕೆಯಲ್ಲಿದ್ದ ಮೂರು ಸಾವಿರ ಮಠದ ಸ್ವಾಮಿಗಳತ್ತ ಕೈ ಮಾಡಿ ‘ಸ್ವಾಮೀಜಿ, ಅನ್ಯ ಧರ್ಮೀಯರು ಹಿಂದು ಧರ್ಮದ ನಾಶಕ್ಕೆ ಯತ್ನಿಸುತ್ತಿದ್ದಾರೆ. ಅದನ್ನು ತಡೆಗಟ್ಟಲು ಯತ್ನಿಸಿ ಇಲ್ಲದಿದ್ದರೆ ನಿಮ್ಮ ಥ್ರೀ ಥೌಜಂಡ್, ಸಿಕ್ಸ್ ಥೌಜಂಡ್ ಮಠಗಳು ಉಳಿಯಲಾರವು ಎಂದು ಉಚ್ಚರಿಸಿದಾಗ ಸಭಿಕರು ಸ್ಥಂಬೀಭೂತರಾದರು!.

ಇದಾದ ಕೆಲವು ವರ್ಷಗಳ ನಂತರ ನಾನು ಖಾಸಗಿ ಕೆಲಸಕ್ಕೆಂದು ಬೆಂಗಳೂರಿಗೆ ಹೋಗಿದ್ದೆ. ಅದೇನು ಕರ್ಮಧರ್ಮ ಸಹಯೋಗವೋ ಅಲ್ಲಿ ಆಗ ಮತ್ತೆ ಅಖಿಲ ಕರ್ನಾಟಕ ಬ್ರಾಹ್ಮಣ ಮಹಾ ಸಮ್ಮೇಳನ ನಡೆಯುತ್ತಿತ್ತು. ನನ್ನ ಎಲ್ಲ ಕೆಲಸವನ್ನು ಬದಿಗೊತ್ತಿ ಅಲ್ಲಿಗೆ ಹೋದೆ. ಆಗ ರಾಮಕೃಷ್ಣ ಹೆಗಡೆ ಮುಖ್ಯಮಂತ್ರಿಯಾಗಿದ್ದರು. ಗುಂಡುರಾವ್ ಮಾಜಿ ಮುಖ್ಯಮಂತ್ರಿಯಾಗಿದ್ದರು ಕೂಡ ಇಬ್ಬರನ್ನು ಆಮಂತ್ರಿಸಲಾಗಿತ್ತು. ಹೆಗಡೆಯವರು ತಮ್ಮ ಚಾಣಾಕ್ಷತನವನ್ನು ಮೆರೆದು ‘ಜಾತ್ಯತೀತ’ ಭಾಷಣ ಬಿಗಿದರು. ನಂತರ ಮಾತನಾಡಿದ ಗುಂಡೂರಾವ್ ನೇರವಾಗಿ ಹೆಗಡೆಯವರನ್ನೇ ಉದ್ದೇಶಿಸಿ ‘ಹೆಗಡೆಯವರೆ ನೀವು ಜಾತ್ಯತೀತರೆಂದು ಎಷ್ಟೇ ಗಂಟಲು ಹರಿದುಕೊಂಡರೂ ಜನ ನಿಮ್ಮನ್ನು ಬ್ರಾಹ್ಮಣ ಎಂದೇ ಗುರುತಿಸುತ್ತಾರೆ ಅದು ನೆನಪಿರಲಿ. ನಾನು ಬಾಹ್ಮಣ ಎಂದು ಘಂಟಾಘೋಷವಾಗಿ ಹೇಳಿಕೊಳ್ಳುತ್ತೇನೆ. ಆದರೆ ಕೋಳಿ ತಿಳಿಸಾರು, ಅನ್ನ ತಿನ್ನುವ ಬ್ರಾಹ್ಮಣ. ಬ್ರಾಹ್ಮಣರ ಮೇಲಿನ ಅನ್ಯಾಯವನ್ನು ನಾನೆಂದೂ ಸಹಿಸುವುದಿಲ್ಲ’ ಎಂದು ಹೇಳಿದಾಗ ಹುಬ್ಬಳ್ಳಿ ಸಮ್ಮೇಳನದ ಪ್ರತಿಧ್ವನಿ ಕೇಳಿ ಬಂತು. ಹುಬ್ಬಳ್ಳಿಯ ಸಮ್ಮೇಳನದಲ್ಲಿ ಗುಂಡುರಾವ್ ಇನ್ನೊಂದು ಮಾತನ್ನು ಹೇಳಿದ್ದರು. ಬ್ರಾಹ್ಮಣರಿಗೆ ಎಲ್ಲೆ ಅನ್ಯಾಯವಾದರೂ ನನಗೊಂದು ಪೋಸ್ಟ್ ಕಾರ್ಡ್ ಬರೆಯಿರಿ. ನಾನು ಬಂದು ನಿಮ್ಮ ಪರವಾಗಿ ಹೋರಾಡುತ್ತೇನೆಂದು ವಚನ ಕೊಟ್ಟಿದ್ದರು.
  ‘ವಿಶ್ವವಾಣಿ’ಯ ಅಂಕಣಕಾರ ರೋಹಿತ್ ಚಕ್ರತೀರ್ಥರು ತಮ್ಮ ಲೇಖನದಲ್ಲಿ ವೈ.ಎಸ್.ವಿ.ದತ್ತಾ ಹಾಗೂ ಆರ್.ವಿ.ದೇಶಪಾಂಡೆ ಎಂದಾದರೂ ಬ್ರಾಹ್ಮಣರ ಪರವಾಗಿ ದನಿ ಎತ್ತಿದ್ದಾರೆಯೇ? ಎಂದು ಕೇಳಿದ್ದಾರೆ. ನನ್ನ ಪ್ರಶ್ನೆಯೆಂದರೆ ಬ್ರಾಹ್ಮಣರ ದೀರೋದಾತ್ತ ನಾಯಕ ಆರ್. ಗುಂಡುರಾವ್ ಅವರ ಪುತ್ರ ದಿನೇಶ್ ಗುಂಡುರಾವ್ ಏಕೆ ಮೌನವಾಗಿದ್ದಾರೆ? ನಾನೊಮ್ಮೆ ಬ್ರಾಹ್ಮಣ ಧುರೀಣನ ಜತೆ ಮಾತನಾಡುವಾಗ ‘ಅಂತೂ ಎಂಟು ವರ್ಷ ಬ್ರಾಹ್ಮಣರಿಬ್ಬರು ರಾಜ್ಯವನ್ನಾಳಿದರು’ ಎಂದು ಹೇಳಿದಾಗ ತಬ್ಬಿಬ್ಬಾದ ಆ ಧುರೀಣ ‘ಜೋಷಿ ಆಟ್ ವಾಟ್ ಕಾಸ್ಟ್? ಮೊದಲೇ ನಮ್ಮನ್ನು ದ್ವೇಷಿಸುತ್ತ ಬಂದವರಿಗೆ ಇದರಿಂದ ಹೆಚ್ಚಿನ ಕುಮ್ಮಕ್ಕು ಸಿಗುತ್ತದೆ’ ಎಂದು ಮುಂಬರುವ ಕೆಟ್ಟ ದಿನಗಳ ಬಗ್ಗೆ ಚಿಂತಿತರಾದರು. ಕರ್ನಾಟಕದಲ್ಲಿ ಇನ್ನು ಮುಂದೆ ಬ್ರಾಹ್ಮಣ ಮುಖ್ಯಮಂತ್ರಿ ಆಗದಂತೆ ನೋಡಿಕೊಳ್ಳುವುದಾಗಿ ಬ್ರಾಹ್ಮಣೇತರ ಧುರೀಣರೊಬ್ಬರು ರಾಮಕೃಷ್ಣ ಹೆಗಡೆ ರಾಜೀನಾಮೆ ನೀಡಿದಾಗ ಹೇಳಿದ್ದು ಈಗ ನೆನಗೆ ನೆನಪಾಗುತ್ತದೆ.

ಬ್ರಾಹ್ಮಣರು ಸುಸ್ಥಿತಿಯಲ್ಲಿದ್ದಾರೆ. ಅವರಿಗೆ ಯಾವುದೇ ರೀತಿಯ ಸೌಲಭ್ಯವನ್ನು ಒದಗಿಸುವ ಅಗತ್ಯವಿಲ್ಲವೆಂಬ ಭಾವನೆಯನ್ನು ಬೆಳೆಸಿಕೊಂಡು ಬರಲಾಗಿದೆ. ಬ್ರಾಹ್ಮಣರಲ್ಲಿ ಹೋರಾಟದ ಭಾವನೆ ಇಲ್ಲದಿರುವುದೂ ಇಂಥ ಪ್ರಚಾರಕ್ಕೆ ಇಂಬು ನೀಡಿದೆ. ಆದರೆ ಬ್ರಾಹ್ಮಣರು ಎಂಥ ದುಃ ಸ್ಥಿತಿಯಲ್ಲಿದ್ದಾರೆಂಬುದನ್ನು ದಿವಂಗತ ಎಲ್.ಜಿ. ಹಾವನೂರ ಅವರು ವಿವರಿಸಿದ್ದು ನನ್ನ ಕಿವಿಯಲ್ಲಿ ಇನ್ನೂ ಗುಯ್ಗುಡುತ್ತಿದೆ. ದೇವರಾಜ್ ಅರಸು ನೇಮಿಸಿದ್ದ ರಾಜ್ಯದ ಪ್ರಥಮ ಹಿಂದುಳಿದ ಆಯೋಗದ ಅಧ್ಯಕ್ಷರಾಗಿ ಹಾವನೂರ ಸಲ್ಲಿಸಿದ ವರದಿ ಸುಪ್ರಸಿದ್ದವಾಗಿದೆ. ಒಮ್ಮೆ ನಾವು ನಾಲ್ಕಾರು ಜನ ಪತ್ರಕರ್ತರು ಹುಬ್ಬಳ್ಳಿ ಸರ್ಕೀಟ್ ಹೌಸ್ನಲ್ಲಿ ಅವರೊಡನೆ ಮಾತನಾಡುತ್ತಾ ಕುಳಿತಿದ್ದೆವು.
  ಆಗ ಅವರು ವರದಿ ಸಿದ್ದಪಡಿಸುವಾಗಿನ ಅನುಭವ ಹೇಳುತ್ತ ‘ನಿಮಗೆ ಗೊತ್ತಿಲ್ಲ, ಕೆಲವು ಕಡೆ ಬ್ರಾಹ್ಮಣರ ಸ್ಥಿತಿ ಪರಿಶಿಷ್ಟ ಜಾತಿ ಹಾಗೂ ಪಂಗಡದವರಿಗಿಂತ ಕೆಳ ಮಟ್ಟದಲ್ಲಿದೆ. ಅನೇಕ ಜನರಿಗೆ ಗೊತ್ತಿರದಷ್ಟು ಬ್ರಾಹ್ಮಣರಲ್ಲಿ ಒಳಪಂಗಡಗಳಿವೆ. ಅದರಲ್ಲೂ ದಕ್ಷಿಣ ಕನ್ನಡದಲ್ಲಿ ತೀರ ಶೋಚನೀಯ ಸ್ಥಿತಿಯಲ್ಲಿದ್ದಾರೆ. ರಾಜಕೀಯಕ್ಕಾಗಿ ಬ್ರಾಹ್ಮಣರನ್ನು ಬಲಿಪಶುವನ್ನಾಗಿ ಮಾಡಲಾಗುತ್ತಿದೆ’ ಎಂದರು. ಅಲ್ಲಿದ್ದ ನಾಲ್ಕಾರು ಜನ ಪತ್ರಕರ್ತರಲ್ಲಿ ಹೆಚ್ಚಿನವರು ಬ್ರಾಹ್ಮಣರಾಗಿದ್ದಕ್ಕೆ ಈ ವಿಷಯ ಪ್ರಸ್ತಾಪಿಸಿದರೆನೆಸುತ್ತದೆ. ‘ಬ್ರಾಹ್ಮಣರ ದುಃಸ್ಥಿತಿಗೆ ಸ್ವತಃ ಅವರೂ ಕಾರಣೀಭೂತರಾಗಿದ್ದಾರೆ.
  ಅಲ್ಪದರಲ್ಲಿ ತೃಪ್ತಿ ಪಟ್ಟುಕೊಳ್ಳುವುದು, ಹೆಚ್ಚಿನ ಪರಿಶ್ರಮ ಬೇಡ, ರಿಸ್ಕ್ ತೆಗೆದುಕೊಳ್ಳಲು ಹಿಂದೇಟು ಹಾಕುವುದು ಇವೆ ಮೊದಲಾದ ಕಾರಣಗಳಿಂದ ಹಿಂದೆ ಬಿದ್ದಿದ್ದರೆನ್ನಲೂಬಹುದು. ‘ಬ್ರಾಹ್ಮಣರು ತಮಗಾಗಿ ಪ್ರಾಮಾಣಿಕವಾಗಿ ದುಡಿಯುತ್ತಾರೆ. ಅಂತೆಯೇ ನನ್ನ ನೌಕರರಲ್ಲಿ ಶೇಕಡಾ ೯೦ರಷ್ಟು ಜನ ಬ್ರಾಹ್ಮಣರನ್ನು ತೆಗೆದುಕೊಂಡಿದ್ದೇನೆ’ ಎಂದು ಉತ್ತರ ಕರ್ನಾಟಕದ ಒಬ್ಬ ದೊಡ್ಡ ಬ್ರಾಹ್ಮಣೇತರ ಉದ್ದಿಮೆದಾರ ಒಮ್ಮೆ ಹೇಳಿದ್ದು ಎಲ್ಲೋ ಓದಿದ ನೆನಪು.

ತಮಿಳುನಾಡಿನಲ್ಲಿ ಬ್ರಾಹ್ಮಣರ ತೇಜೋವಧೆ ವ್ಯವಸ್ಥಿತವಾಗಿ ದಶಕಗಳ ಕಾಲ ನಡೆದದ್ದು ಎಲ್ಲರಿಗೂ ಗೊತ್ತಿರುವ ವಿಷಯ. ಆದರೆ ಮುಂದೆ ಅಲ್ಲಿಯ ಬ್ರಾಹ್ಮಣರು ಎಚ್ಚೆತ್ತು ಒಗ್ಗಟ್ಟಿನಿಂದ ಹೋರಾಡಿ ತಮ್ಮ ವಿರುದ್ದ ನಡೆದಿದ್ದ ದಬ್ಬಾಳಿಕೆಯನ್ನು ಹೇಗೆ ನಿಲ್ಲಿಸಿದರೆಂಬುದು ಈಗ ಇತಿಹಾಸ. ಉಳಿದ ಕಡೆಯ ಬ್ರಾಹ್ಮಣರು ಅದರಿಂದ ಯಾವ ಪಾಠವನ್ನೂ ಕಲಿಯಲಿಲ್ಲ.

ಬ್ರಾಹ್ಮಣರ ದುಃಸ್ಥಿತಿಯ ಬಗ್ಗೆ ಆಳವಾದ ಅಧ್ಯಯನ ಮಾಡಿ ಜನರ ಮುಂದಿಡುವ ಪ್ರಯತ್ನ ಕೂಡ ನಡೆಯದಿರುವುದು ಶೋಚನೀಯ. ಜಾಣರು ಎಂದು ಹೊಗಳಿಸಿಕೊಳ್ಳುವುದರಲ್ಲೇ ತೃಪ್ತಿಪಟ್ಟುಕೊಂಡ ಅವರು ಇಂಥ ಉಪಯುಕ್ತ ಕೆಲಸವನ್ನು ಮಾಡಲಿಲ್ಲ. ಆಂಧ್ರಪ್ರದೇಶ (ಅವಿಭಜಿತ)ದಲ್ಲಿ ಬ್ರಾಹ್ಮಣರ ಸ್ಥಿತಿಗತಿ ಕುರಿತು ಸಮೀಕ್ಷೆ ನಡೆಸಿ ಒಂದು ಪುಸ್ತಕ ಪ್ರಕಟವಾಗಿದೆ. ಸುಮಾರು 17-18 ವರ್ಷಗಳ ಹಿಂದೆ ನಾನದನ್ನು ಓದಿರುವೆ. ಅದೂ ಬಹಳ ಹಳೆಯದು. ಜವಾಹರಲಾಲ ನೆಹರು ಕಾಲಕ್ಕೆ ಯೋಜನಾ ಆಯೋಗದ ಸದಸ್ಯೆಯಾಗಿದ್ದ ಲಕ್ಷ್ಮಿ ಜೈನ್ ಎಂಬವರು ಅದನ್ನು ಬರೆದಿದ್ದರು. ಅದರ ಬಗ್ಗೆ ಈಗ ನನ್ನ ಹತ್ತಿರ ಟಿಪ್ಪಣಿ ಇಲ್ಲ. ಸ್ಮೃತಿಯಿಂದ ಹೇಳುತ್ತಿದ್ದೇನೆ ಅಷ್ಟೇ. ಇಷ್ಟಾಗಿಯೂ ಬ್ರಾಹ್ಮಣರು ಇನ್ನು ಸುಸಂಸ್ಕೃತರಾಗಿ ಉಳಿದಿರುವುದನ್ನು ಹೆಮ್ಮೆಯಿಂದ ಸ್ಮರಿಸಬೇಕು.

ಪತ್ರಿಕೆಗಳಲ್ಲಿ ಬರುವ ಕ್ರೈಮ್ ವರದಿಗಳನ್ನು ನೋಡಿ, ಆಪಾದಿತರು ಹಾಗೂ ಅಪರಾಧಿಗಳಲ್ಲಿ ಬ್ರಾಹ್ಮಣರ ಸಂಖ್ಯೆ ತೀರ ಅತ್ಯಲ್ಪ. ಇದನ್ನು ಯಾರೂ ಗುರುತಿಸುವುದಿಲ್ಲ. ಈ ಪರಿಸ್ಥಿತಿಯಲ್ಲಿ ಬ್ರಾಹ್ಮಣರು ಏನು ಮಾಡಬೇಕು? ಬ್ರಾಹ್ಮಣರು ಒಳಪಂಗಡ ಮರೆತು ಎಲ್ಲರೂ ಒಂದಾಗಬೇಕೆಂದು ರೋಹಿತ್ ಚಕ್ರತೀರ್ಥ ‘ವಿಶ್ವವಾಣಿ’ಯ ಲೇಖನದಲ್ಲಿ ಹೇಳಿದ್ದಾರೆ. ಅದಂತೂ ಮೊದಲ ಆದ್ಯತೆಯಾಗಬೇಕು. ಮೀಸಲಾತಿ ಕೇಳಬೇಡಿ ಎಂದೂ ಅವರು ಸೂಚ್ಯವಾಗಿ ಹೇಳಿದ್ದಾರೆ. ಹಾಗಾದರೆ ಒಂದಾಗಿ ಏನು ಮಾಡಬೇಕು?

ನನ್ನ ಮುಂದೆ ಒಂದು ಸ್ಪಷ್ಟ ಕಲ್ಪನೆ ಇದೆ. ಹಳೆ ತಲೆಮಾರಿನವರು ಕೈ ಚೆಲ್ಲಿ ಕುಳಿತಿದ್ದಾರೆ. ಇನ್ನು ಮಠಾಧಿಶರು ಒಂದು ಸರ್ವಸಮ್ಮತ ಪಂಚಾಂಗ ರೂಪಿಸಲು ವಿಫಲರಾಗಿರುವ ಇವರು ಹೊಸ ಮಾರ್ಗ ತೋರಿಸಬಲ್ಲರೇ? ನನ್ನ ದೃಷ್ಟಿಯಲ್ಲಿ ಬ್ರಾಹ್ಮಣ ಯುವಕರು ಈ ಹೋರಾಟದ ನೇತೃತ್ವ ವಹಿಸಬೇಕು. ಯಾಕೆಂದರೆ ಭವಿಷ್ಯ ಅವರಿಗೆ ಸೇರಿದ್ದು ಶಿಕ್ಷಣ ಪಡೆಯಲು, ಉದ್ಯೋಗ ದೊರಕಿಸಲು ಯಾವ ಅವಕಾಶವೂ ಇಲ್ಲದೆ ನಿರಾಶೆಯ ಜೀವನ ನಡೆಸುತ್ತಿರುವ ಸಾವಿರಾರು ಜನ ಬ್ರಾಹ್ಮಣ ಯುವಕರು ಮೈಕೊಡವಿ ಎದ್ದು ನಿಂತು ನಾವೊಂದು ಮರ್ಯಾದೆಯ ಹಾಗೂ ಸುರಕ್ಷಿತ ಜೀವನ ಕಟ್ಟಿ ಕೊಳ್ಳುವವರೆಗೆ ವಿಶ್ರಮಿಸದಿರಲು ಪಣ ತೊಡಬೇಕು.
 
ವೈ.ಎನ್ ಜೋಶಿ 
(ಲೇಖಕರು ಹಿರಿಯ ಪತ್ರಕರ್ತರು)

Comments

Popular Posts